ಶುಕ್ರವಾರ, ಸೆಪ್ಟೆಂಬರ್ 20, 2024

ಹಂದಾಡಿ ಸಂತಾನ ಗೋಪಾಲಕೃಷ್ಣಸ್ವಾಮಿ ದೇವಸ್ಥಾನ



ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಮುಂತಾದ ಸ್ಥಳಗಳ

ಪರಿಚಯ ಎಲ್ಲರಿಗೂ ಇದೆ. ಜಿಲ್ಲೆಯ ಒಳಭಾಗಗಳಲ್ಲಿ ಸಹ ಪ್ರಸಿದ್ಧಿಗೆ ಬಾರದಿರುವ ಅನೇಕ ಪುರಾತನ

ದೇವಾಲಯಗಳಿವೆ. ಅಲ್ಲಿಯೂ ದಿನನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಹಳೆಯ ಪರಿಸರ,

ಪದ್ಧತಿಗಳನ್ನು ಉಳಿಸಿಕೊಂಡಿವೆ. ಆದರೆ ಜನಸಂದಣಿ ಮತ್ತು ಅಂಗಡಿ ಮುಂಗಟ್ಟುಗಳ ದಟ್ಟಣೆಯಿಲ್ಲದೆ

ಪ್ರಶಾಂತವಾಗಿವೆ. ಮನಸ್ಸಿಗೆ ಹಿತವೆನಿಸುವ ಅಂಥ ಅನೇಕ ದೇವಸ್ಥಾನಗಳಲ್ಲಿ ಹಂದಾಡಿಯ

‘ಹೆಗಡೆ ಶ್ರೀ ಸಂತಾನ ಗೋಪಾಲಕೃಷ್ಣ ಸ್ವಾಮಿ’ಯ ದೇವಸ್ಥಾನವೂ ಒಂದು.  


ಇಂಥ ಅನೇಕ ಪುರಾತನ ದೇವಸ್ಥಾನಗಳ ಇತಿಹಾಸವನ್ನು ತಿಳಿಯುವ ಆಸಕ್ತಿ ನಮಗಿದ್ದರೂ ಸಹ ಅವುಗಳ

ಬಗ್ಗೆ ಸರಿಯಾದ  ಮಾಹಿತಿ ಕೊಡುವ ವ್ಯವಸ್ಥೆಯಿಲ್ಲದೆ ಅನೇಕಬಾರಿ ನಿರಾಸೆಯಾಗುತ್ತದೆ. ಆದರೆ

ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿರುವ ಶೀಲಾ ಶಾಸನಗಳು ಮತ್ತು ಅದರ ತಿಳಿಯಾದ ಕನ್ನಡ

ತರ್ಜುಮೆಯ ಫಲಕಗಳ ಮೂಲಕ ಈ ದೇವಸ್ಥಾನದ ಬಗೆಗೆ ವಿವರವಾದ ಮಾಹಿತಿ ನಮಗೆ ಲಭ್ಯವಾಗಿದೆ.  


ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನಶಕವರುಷ ೧೪೦೪ (ಕ್ರಿ ಶ ೧೪೯೪) ಸಂದು ಕಠಾರಿ ಸಾಳುವ

ನರಸಿಂಹರಾಯರ ಕುಮಾರ ಇಮ್ಮಡಿ ನರಸಿಂಹರಾಯರು ವಿಜಯನಗರ ಸಿಂಹಾಸನದಲ್ಲೂ ಸಕಲ

ಸಾಮ್ರಾಜ್ಯವನಾಳುವ ಕಾಲದಲ್ಲಿ ...... ........ ಬ್ರಂಹರ ಗ್ರಾಮದವೊಳಗೆ ಮೂಡಭಾಗದಲ್ಲಿ

ಹಂದಾಡಿಯ ಅಧಿವಾಸದೊಳಗೆ ಕೋಟೆಗೇರಿಯ.......  ಹೊಸಬಣ್ಣಸೆಟಿಯರ ಅಳಿಯ ಸಂಕುಹೆಗಡೆ

ಪ್ರತಿಷ್ಠೆಯ ಮಾಡಿಸಿದ ಶ್ರೀ ಗೋಪಿನಾಥದೇವರ ........  ಪ್ರತಿಷ್ಠೆಯಾದ ಪುಣ್ಯತಿಥಿಯಲ್ಲಿ ........

ಆಚಂದ್ರಾರ್ಕಸ್ಥಾಯಿಯಾಗಿ ದಿನಚರಿ ಶ್ರೀಬಲಿ ನಡೆವಹಾಗೆ ಧಾರೆಯೆರೆದುಕೊಟ್ಟ  ...... .........  


ಇತ್ಯಾದಿ ಇತ್ಯಾದಿಯಾಗಿ ಪ್ರಾರಂಭವಾಗುವ ಶಾಸನ, ದೇವಸ್ಥಾನಕ್ಕೆ ಅರಮನೆಯಿಂದ ಕೊಡಮಾಡಿದ

ಜಮೀನುಗಳ ಹಾಗೂ ಬಿಟ್ಟುಕೊಟ್ಟ ಆದಾಯ (ಸುಂಕ) ಗಳ ತಪಶೀಲನ್ನು ವಿವರವಾಗಿ ತಿಳಿಸುತ್ತದೆ. 


ಮೇಲೆ ತಿಳಿಸಿದಂತೆ ಸುಮಾರು ಐನೂರು ವರುಷಗಳಹಿಂದೆ ಶ್ರೀ ಸಂಕುಹೆಗಡೆ ಎಂಬುವರಿಂದ

ಪ್ರತಿಷ್ಠಾಪಿತವಾದ ಗೋಪಿನಾಥ ಅಥವಾ ಗೋಪಾಲಕೃಷ್ಣ ದೇವರು, ಮುಂದೆ ಆ ಪೀಳಿಗೆಯಲ್ಲಿ

‘ಹಂದಾಡಿಯ ನಾಲ್ಕುಮನೆ’ ಎಂದು ಹೆಸರಾದ ದೊಡ್ಡಮನೆ, ತೆಂಕುಮನೆ, ಪಳತ್ತು ಮನೆ ಮತ್ತು

ಪಡುಮನೆಗಳ ಮೂಲದೇವರಾದರು. ಈ ನಾಲ್ಕೂ ಸಂಸಾರಗಳ  ಇಂದಿನ ಪೀಳಿಗೆಯ ಸದಸ್ಯರು

ಈಗಲೂ ಆ ಗೋಪಾಲಕೃಷ್ಣದೇವರಿಗೆ ಶ್ರದ್ಧೆಯಿಂದ ನಡೆದುಕೊಂಡು ಬಂದಿದ್ದಾರೆ.


ಕಾಲಾನುಕ್ರಮದಲ್ಲಿ ಹಾಳಾಗುತ್ತ ಬಂದಿದ್ದ ಹಳೆಯ ಕಟ್ಟಡವನ್ನು ಕೆಡವಿ ಪೂರ್ಣ ಹೊಸಕಟ್ಟಡದ

ನಿರ್ಮಾಣ ಮಾಡಲಾಗಿದೆ. ಮೇಲ್ಕಾಣಿಸಿದ ಹಂದಾಡಿ ದೊಡ್ಡಮನೆಯ ಶ್ರೀ ಸಂತೋಷಕುಮಾರ

ಶೆಟ್ಟಿಯವರ ನೇತೃತ್ವದಲ್ಲಿ ಕಟ್ಟಲಾದ ಹೊಸಕಟ್ಟಡಕ್ಕೆ ತಗುಲಿದ ಐದುಕೋಟಿಗೂ ಮೀರಿದ ವೆಚ್ಚವನ್ನು

‘ನಾಲ್ಕುಮನೆ’ ಗಳ ಸದಸ್ಯರು ಹಾಗೂ ಊರಿನ ಮತ್ತು ಪರಸ್ಥಳಗಳ ಇತರ ಭಕ್ತರ ದೇಣಿಗೆಯಿಂದ

ಭರಿಸಲಾಗಿದೆ. ಹಂದಾಡಿ ಗ್ರಾಮದಲ್ಲಿ ಪವಿತ್ರವಾದ ಸೀತಾನದಿಯ ಬಲದಂಡೆಯಮೇಲೆ ಕಟ್ಟಿರುವ

ಶಿಲಾಕಟ್ಟಡ, ಚೊಕ್ಕವಾಗಿ, ಸುಂದರವಾಗಿದ್ದು ದಕ್ಷಿಣಕನ್ನಡದ ಇತರ ದೇವಸ್ಥಾನಗಳ ಮಾದರಿಯಲ್ಲೇ

ಕಟ್ಟಲ್ಪಟ್ಟಿದೆ. ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡು ಮನಸ್ಸಿಗೆ ಮುದನೀಡುವಂತಿದೆ. ಹತ್ತಿರದಲ್ಲೇ

ಹರಿವ ನದಿ ಮತ್ತು ಅದರ ಬದಿಯ ಸ್ವಚ್ಛವಾದ ಪರಿಸರ ಹಸುರಿನಿಂದ ಕೂಡಿ ಮನಸ್ಸಿಗೆ ಆಹ್ಲಾದಕರವಾಗಿದೆ. 


ಐದುಶತಮಾನಗಳ ಹಿಂದಿನಿಂದ ಪೂಜೆಗೊಳ್ಳುತ್ತಿರುವ ಶ್ರೀ ಗೋಪಾಲಕೃಷ್ಣದೇವರ ಸುಂದರವಾದ

ಮೂಲ ವಿಗ್ರಹಕ್ಕೆ  ಧಕ್ಕೆಯಾಗದಂತೆ ಉಳಿಸಿಕೊಂಡು ಹೊಸದಾಗಿ ನಿರ್ಮಿತವಾದ ಕಟ್ಟಡದಲ್ಲಿ

ಪುನರ್ಪ್ರತಿಷ್ಠಾಪನೆ ಮಾಡಲಾಗಿದೆ. ಆ ಮೂಲಕ ದೇವಸ್ಥಾನವು, ಶ್ರೀ ಡಿ ವಿ ಜಿ ಯವರ 

ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು 

ಹೊಸಯುಕ್ತಿ ಹಳೆತತ್ವ ದೊಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 

ಜಸವು ಜನಜೀವನಕೆ ಮಂಕುತಿಮ್ಮ    


ಎಂಬ ಸಾಲುಗಳನ್ನು  ನೆನಪಿಗೆ ತರುವಂತಿದೆ! 


ದೇವಸ್ಥಾನವನ್ನು ಸಂದರ್ಶಿಸುವವರ ಅನುಕೂಲಕ್ಕಾಗಿ ಉಡುಪಿ - ಕುಂದಾಪುರ ಮಾರ್ಗದಲ್ಲಿ ಬ್ರಹ್ಮಾವರದ

ಬಳಿ ಹಾಗೂ ಬ್ರಹ್ಮಾವರ - ಬಾರಕೂರಿನ ಮಾರ್ಗದಲ್ಲಿ ಸಹ ಮಾರ್ಗದರ್ಶಿ ಫಲಕಗಳನ್ನು ಸ್ಥಾಪಿಸಲಾಗಿದೆ.

ಹೆದ್ದಾರಿಯಿಂದ ಸುಮಾರು ಐದುನಿಮಿಷದ ಹಾದಿಯಾದ್ದರಿಂದ ಸುಲಭವಾಗಿ ಭೇಟಿಮಾಡಿ

ಗೋಪಾಲಕೃಷ್ಣದೇವರ ದರ್ಶನಪಡೆದು, ಕೊಂಚಕಾಲಕಳೆದು ಮನೋಲ್ಲಾಸ, ಮನಸ್ಸಮಾಧಾನಗಳನ್ನು

ಅನುಭವಿಸಬಹುದಾದ ಸ್ಥಳ ಇದಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ