ಶುಕ್ರವಾರ, ಫೆಬ್ರವರಿ 9, 2024

ಏಕಸ್ತನಿ ದೇವಿ

While I was wandering around the streets

of Kumata City during my morning walk recently,

I came across a mini temple structure on a

platform around a tree (What we usually call

an ‘AraLikaTTe’). Such structures are usually

built in the honour of a lesser known deity or

a supernatural being. The board in front of the

structure said ‘Naaga Mahaasati’ and

‘eka stani devi’.  I could guess what naaga

mahaasati was, but I was intrigued by ‘eka

stani devi’ - the deity with a single breast. 

I am sure that there will be some legend

behind the name but probably there would

be no one now, who would know the story.  

I used my imagination and built a story

around the ‘eka stani devi’. 

The story and the names are entirely my

imagination. So, please read it as pure fiction. 



ಈಗ ನಾವು ಕುಮಟಾ ಎಂದು ಕರೆಯುವ ಊರಿಗೆ ಹಿಂದೆ

ಕಮ್ಮತಗೇರಿ ಎಂದು ಹೆಸರಿದ್ದಿತಂತೆ. ಕಮ್ಮತ ಎಂದರೆ ಕೃಷಿಯಲ್ಲಿ

ನಿರತರಾದವರು ಎಂದು ಅರ್ಥ. ಕರಾವಳಿಯಲ್ಲಿ ಬಹುತೇಕವಾಗಿ 

ಮೀನುಗಾರಿಕೆಗೆ ಪ್ರಾಧಾನ್ಯ. ಆದರೆ ಕಮ್ಮತಗೇರಿಯ ಜನ

ಕೃಷಿಯಲ್ಲಿ ನಿರತರಾದವರು. ಮೈಮುರಿದು ದುಡಿದು ಬೆಳೆತೆಗೆದು,

ಜತೆಗೆ ದನ ಕರುಗಳನ್ನು ಸಾಕಿಕೊಂಡು ಬಾಳುತ್ತಿದ್ದವರು.

ಸಮೃದ್ಧಿಯಾಗಿ ಧಾನ್ಯ, ಹಾಲು, ಹೈನುಗಳಿದ್ದವರು.

ಅದರಿಂದಲೋ ಏನೋ ಕೊಡುಗೈಯವರೆಂದು ಹೆಸರಾದವರು.

ಊರಿನವರ ಧಾರಾಳತನದಿಂದ ಮತ್ತು  ಬಳಕೆಗೆ ಅನುಕೂಲವಾಗಿ

ಸಿಗುತ್ತಿದ್ದ ಅಘನಾಶಿನಿ ನದಿಯ ನೀರಿನ ಪ್ರಭಾವದಿಂದ,

ಊರಿಂದೂರಿಗೆ ಅಲೆದು ಜೀವಿಸುತ್ತಿದ್ದ ಅಲೆಮಾರಿಜನಾಂಗದ

ಅನೇಕರು, (‘ಜಿಪ್ಸಿ’ಗಳು), ವರ್ಷದಲ್ಲಿ ಹಲವಾರು ತಿಂಗಳುಗಳ

ಕಾಲ ಕಮ್ಮತಗೇರಿಯಲ್ಲೇ ಬೀಡು ಬಿಡುತ್ತಿದ್ದರಂತೆ. ಹಾಗೆ ಈ

ಬೀಡಿನಲ್ಲಿ ಬೀಡುಬಿಟ್ಟವರಲ್ಲಿ ಸಾಧುಗಳು, ಸಂತರೂ ಇರುತ್ತಿದ್ದರೆಂದು

ಹೇಳಬೇಕಾದ್ದೇ ಇಲ್ಲ. 


ವರುಷಕ್ಕೊಮ್ಮೆ ಈ ಊರಿಗೆ ಬರುತ್ತಿದ್ದ ಅನೇಕರಲ್ಲಿ ಒಬ್ಬಳು ಗಂಗಾವಳಿಯ

ತುಂಗಾ. ಈಕೆ ಒಬ್ಬ ಸಾಧ್ವಿಯೋ ಸನ್ಯಾಸಿನಿಯೋ ಇದ್ದಿರಬಹುದೆನ್ನುತ್ತಾರೆ. ತೇಜಪೂರ್ಣವಾಗಿ ಕಂಗೊಳಿಸುವ ಮುಖ, ಹೊಳೆವ ಕಣ್ಣುಗಳುಳ್ಳವಳು. ಆಕೆ ಎಲ್ಲಿಯವಳೋ ಯಾರಿಗೂ ಸರಿಯಾಗಿ ತಿಳಿಯದು. ಗಂಗಾವಳಿಯವಳೆಂದು

ಯಾರೋ ಅಂದಿದ್ದರು ಅಷ್ಟೇ. ಅವಳ ತಂದೆ, ತಾಯಿ, ಹಿಂದು,

ಮುಂದು ಮತ್ತೇನೂ ಯಾರಿಗೂ ತಿಳಿಯದು. ಆಕೆಯ ಹೆಸರೇನೆಂದು

ಸಹ ಯಾರಿಗೂ ತಿಳಿಯದು. ನಾನು ನನ್ನ ಕಥೆಯ ಅನುಕೂಲಕ್ಕೆಂದು

ಆಕೆಯನ್ನು ಗಂಗಾವಳಿಯ ತುಂಗೆ ಅಂದೆನಷ್ಟೆ.        


ಅವಳ ದಿರಿಸೂ ಕೊಂಚ ವಿಚಿತ್ರವೇ. ಕುಪ್ಪಸವಿಲ್ಲದೆ, ಮೈಮುಚ್ಚುವಂತೆ

ಕಾವಿ ಸೀರೆಯುಟ್ಟು, ಜಟೆಯಂತೆ ತುರುಬುಕಟ್ಟುತ್ತಿದ್ದಳು. ಒಳ್ಳೆ

ಹೂ ಸಿಕ್ಕಿದರೆ  ಆ ಜಟೆಗೆ ಒಂದು ಹೂವು ಸಿಕ್ಕಿಕೊಂಡಿರುತ್ತಿತ್ತು.

ಅದಲ್ಲದೆ ಮೈಮೇಲೆ ಸರ ಬಳೆಗಳಾಗಲೀ, ಹಣೆಗೆ ಕುಂಕುಮವಾಗಲೀ

ಮತ್ತೇನೇನೂ ಇಲ್ಲ.  ಹೀಗೆ ಒಂಟಿ ಹೆಂಗಸು ಸನ್ಯಾಸಿಗಳಂತೆ

ಅಲೆದಾಡುವುದು, ಬೇಕಾದಂತೆ ಬರುವುದು, ಹೋಗುವುದು,

ಕೆಲವರಿಗೆ ಸರಿದೋರುತ್ತಿರಲಿಲ್ಲ. ಆದರೆ ಆಕೆ ಯಾರೇನೆನ್ನುತ್ತಾರೆಂದು

ಲೆಕ್ಕಿಸುತ್ತಿರಲಿಲ್ಲ. ಅವಳ ರೀತಿನೀತಿಗಳೇ ಯಾರಿಗೂ

ತಿಳಿಯುತ್ತಿರಲಿಲ್ಲ. ಅವಳಿಗೆ ಯಾರೊಡನೆಯೂ ಅತಿ ಒಡನಾಟವಿಲ್ಲ.

ಆದರೆ ಅವಳೊಡನೆ ಮಾತುಕತೆಯಾಡಿದ ಎಲ್ಲರಿಗೂ ಅದೇನೋ

ಮನಸ್ಸಮಾಧಾನ, ಸಂತೋಷ ಸಿಗುತ್ತಿತ್ತಂತೆ. 



ಈಕೆ ಬಂದಾಗ ಊರಿನ ಪಕ್ಕದಲ್ಲೇ ಹರಿಯುವ ಅಘನಾಶಿನಿ

ನದಿಯ ಬಳಿಯಲ್ಲಿನ ಮಂಟಪವೊಂದರಲ್ಲಿ ವಾಸವಿರುವಳು.

ಆಕೆ ಇರುತ್ತಿದ್ದಷ್ಟು ದಿನ ಮಂಟಪ ಮತ್ತು ಸುತ್ತಮುತ್ತದ

ಜಾಗ ತೊಳೆದಂತೆ ಸ್ವಚ್ಛವಾಗಿರುತ್ತಿತ್ತು. ಬಂದಾಗಲೆಲ್ಲಾ

ಯಾವುದಾದರೂ ಒಂದೆರಡು ಹೂವಿನದೋ, ಹಣ್ಣಿನದೋ

ಸಸಿ ಹಚ್ಚಿ ಬೆಳೆಸಿರುತ್ತಿದ್ದಳು. ಹಿಂದೆ ಅವಳು ನೆಟ್ಟಿದ್ದ ಸೀಬೆ,

ಮಾವು, ಮರವಾಗಿ  ಹಣ್ಣು ಬಿಡುತ್ತಿತ್ತು. ಮಂಟಪಕ್ಕೆ ನೆರಳಾಗಿತ್ತು.

ಸಾಮಾನ್ಯವಾಗಿ ಈಕೆ ಇರುತ್ತಿದ್ದದ್ದು ಒಂದೆರಡು ತಿಂಗಳುಗಳ

ಕಾಲ. ದಿನದ ಬಹುಕಾಲ ಏನೋ ಧ್ಯಾನದಲ್ಲಿದ್ದಂತೆ ಇರುವಳು.

ಯಾರಾದರೂ ಬಂದರೆ ಮಂದಹಾಸದಿಂದ ಮಾತನಾಡಿಸುವಳು.

ಕೊಟ್ಟದ್ದನ್ನು ಸ್ವೀಕರಿಸುವಳು. ಏನನ್ನೂ ಬೇಡುತ್ತಿರಲಿಲ್ಲ.

ಒಂದು ದಿನ ಇದ್ದಕ್ಕಿದ್ದಂತೆ ಆಕೆ ಮುಂದೆ ಹೊರಟುಬಿಡುವಳು.

ಎಲ್ಲಿಗೆಂದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಯಾರೇನು ಮಾಡಿದರೂ,

ಕೇಳಿಕೊಂಡರೂ ಆಕೆ ನಿಲ್ಲುತ್ತಿರಲಿಲ್ಲ. ತಾನು ಒಂದುಕಡೆ ಹೆಚ್ಚುಕಾಲ

ನಿಲ್ಲುವುದು ತಾನು ಅನುಸರಿಸುವ ಧರ್ಮಕ್ಕೆ ಸಲ್ಲದೆಂದು

ಹೇಳುತ್ತಿದ್ದಳು. ಆ ಧರ್ಮ ಯಾವುದೆಂದು ಸಹ ಯಾರಿಗೂ ತಿಳಿಯದು. 


ಆಕೆಯದು ಮತ್ತೊಂದು ವಿಶೇಷವಿತ್ತು. ತಾನು ಕಮ್ಮತಗೇರಿಯಲ್ಲಿದ್ದಾಗ

ಅಲ್ಲಿ ಜನ್ಮತಾಳಿದ ಯಾವುದೇ ಕೂಸಿನ ತಾಯಿ ತೀರಿಕೊಂಡರೆ,

ಅಥವಾ ತಾಯಿಗೆ ಮೊಲೆಹಾಲು ಬರದಾದರೆ, ಕಡಿಮೆಯಾದರೆ

ತುಂಗೆ ಆಕೆಯ ಮಗುವಿಗೆ ತಾನು ಹಾಲೂಡಿಸುವಳು. ತನಗೆ

ಮಕ್ಕಳಿಲ್ಲದಿದ್ದರೂ ಆಕೆಯ ಸ್ತನಗಳಲ್ಲಿ ಬೇಕಾದಾಗ ಬೇಕಾದಂತೆ

ಹಾಲಿನ ಹೊಳೆ ಹರಿಯುತ್ತಿದ್ದಿತಂತೆ. ಸಿಡುಬು, ಪ್ಲೇಗು ಮುಂತಾದ

ಕಾಯಿಲೆಗಳಿಂದ ಜನ ಒಟ್ಟಿಗೇ ಸಾಯುತ್ತಿದ್ದ ಆ ಕಾಲದಲ್ಲಿ ಆಕೆ

ಒಮ್ಮೊಮ್ಮೆ ಒಮ್ಮೆಗೇ ಮೂರು ನಾಕು ಮಕ್ಕಳಿಗೆ ಹಾಲೂಡಿಸಿದ್ದೂ

ಉಂಟು.  ಅಷ್ಟೇ ಅಲ್ಲ. ಕರು ಜನಿಸಿದ ನಂತರದಲ್ಲಿ ತಾಯಿ ಹಸು

ತೀರಿಕೊಂಡ ಒಂದೆರಡು ಸಂಧರ್ಭದಲ್ಲಿ ಆಕೆ ಕರುವಿಗೆ

ಹಾಲೂಡಿಸಿದಳೆಂಬ ಪ್ರತೀತಿಯೂ ಇತ್ತು. ಆದರೆ ಅದನ್ನು

ಪ್ರತ್ಯಕ್ಷವಾಗಿ ಕಂಡವರಿಲ್ಲ. 


ತಾನು ಹಾಲೂಡಿಸುತ್ತಿದ್ದ ಮಗುವಿಗೆ ತನ್ನ ಹಾಲಿಲ್ಲದೆ ನಡೆಯದೆಂದು

ಆಕೆಗೆ ನಂಬಿಕೆಯಾದರೆ ಆಕೆ ಒಂದೆರಡು ತಿಂಗಳ ಹೆಚ್ಚು ಕಾಲ ಆ

ಊರಿನಲ್ಲೇ ಬಿಡಾರ ಹೂಡಿ ಮಗು ಬೇರೆ ಆಹಾರಕ್ಕೆ ಹೊಂದಿಕೊಂಡ

ನಂತರ ಮುಂದೆ ನಡೆಯುವಳು. ಹಾಗೆ ಅವಳ ಮೊಲೆಹಾಲು

ಕುಡಿದ ಕೂಸುಗಳು ಸ್ವಂತ ತಾಯಿಯ ಹಾಲುಕುಡಿದ ಮಕ್ಕಳಿಗಿಂತ

ದಷ್ಟ ಪುಷ್ಟವಾಗಿ, ಧೃಡವಾಗಿ ಬೆಳೆಯುತ್ತವೆಂದು ಜನ ಅನ್ನುತ್ತಿದ್ದರು. 


ಹೀಗೆ ತಾಯಿ ಇಲ್ಲದೆ ತುಂಗೆಯ ಮೊಲೆಹಾಲು ಕುಡಿಯುತ್ತಿದ್ದ 

ಕೂಸುಗಳಲ್ಲಿ ಒಂದು ಸಿಂಗಾನಾಯಕನ ಕೂಸು. ಆದರೆ ವಿಚಿತ್ರವೆಂದರೆ

ಆ ಮಗು ಈಕೆಯ ಮೊಲೆಹಾಲು ಉಳಿದು ಮತ್ತೇನನ್ನೂ ಮುಟ್ಟಲೇ ಇಲ್ಲ.

ಆ ಕೂಸಿಗೆಂದು ತುಂಗೆ ಮೂರುತಿಂಗಳಕಾಲ ಕಮ್ಮತಗೇರಿಯಲ್ಲೇ

ಉಳಿದು ಪ್ರಯತ್ನ ಪಟ್ಟರೂ ಆ ಮಗು ಹಸುವಿನ ಹಾಲನ್ನಾಗಲೀ,

ಮೇಕೆಹಾಲನ್ನಾಗಲೀ  ಅಥವಾ ಕೂಸಿಗೆ ಮೊಲೆಯೂಡಿಸಲು ಒಪ್ಪಿದ

ಇತರ ತಾಯಿಯರ ಹಾಲನ್ನಾಗಲೀ ಮುಟ್ಟಲೇ ಒಲ್ಲದು. 


ಮೂರು ತಿಂಗಳು ಕಳೆದಂತೆ ತುಂಗೆಗೆ ಮುಂದೆ ಹೊರಡುವ ತವಕ. 

ತನ್ನ ಹಾಲಿನ ಸರಬರಾಜು ಪೂರ್ಣವಾಗಿ ನಿಂತರೆ ಮಗು ಬೇರೆ

ಆಹಾರಕ್ಕೆ ಹೊಂದಿಕೊಂಡೀತೆಂದುಕೊಂಡು ಆಕೆ ಹಾಲು

ಕೊಡುವುದನಿಲ್ಲಿಸಿ ಮಗುವನ್ನು ಉಪವಾಸವಿಟ್ಟರೂ ಸಹ ಅದು

ಅತ್ತು ಅತ್ತು ಸೋತು ಸಾಯುವಂತಾಯಿತೇ ವಿನಃ ಬೇರೆ ಆಹಾರ

ಮುಟ್ಟಲಿಲ್ಲ. 


ತುಂಗೆಗೆ ಈ ಕೂಸೊಂದು ಧರ್ಮಸಂಕಟವಾಯಿತು. ತಾನು ಮಗುವನ್ನು

ಬಿಟ್ಟು ಮುಂದೆ ಹೋಗುವಂತಿಲ್ಲ, ಕಮ್ಮತಗೇರಿಯಲ್ಲಿಯೇ

ಉಳಿಯುವಂತೆಯೂ ಇಲ್ಲ.  ಹಾಗೇ ಮತ್ತೊಂದು ತಿಂಗಳು ಕಳೆದನಂತರ

ತುಂಗೆ ಮುಂದೆ ಹೋಗುವುದು ಆಕೆಗೆ ಅನಿವಾರ್ಯವಾಯ್ತು.

ಮಗುವಿನ ಆರೈಕೆಯನ್ನು ಜಗವನ್ನೆಲ್ಲಾ ಸಂಭಾಳಿಸುವ ಜಗದೀಶನಿಗೊಪ್ಪಿಸಿ

ತಾನು ಹೊರಡುವುದಾಗಿ ಆಕೆ ನಿರ್ಧರಿಸಿದಳು. ವಿಷಯ ತಿಳಿದ

ಸಿಂಗಾನಾಯಕ ತನ್ನ ಮಗುವಿಗೆ ಜೀವದಾನ ಮಾಡಬೇಕೆಂದು

ಆಕೆಯ ಕಾಲುಹಿಡಿದವ ಕಾಲು ಬಿಡಲೇ ಇಲ್ಲ. ಸರಿ, ತಾನು

ಏನಾದರೂ ಮಾಡಿ ಮಗುವಿನ ಜೀವ ಉಳಿಸುವುದಾಗಿ ಭರವಸೆ ನೀಡಿ,

ಮಗುವನ್ನು ಒಂದೆರಡು ದಿನ ತನ್ನೊಡನೆಯೇ ಬಿಟ್ಟುಬಿಡುವಂತೆ

ತುಂಗೆ ಸೂಚಿಸಿದಳು. 


ಸಿಂಗಾನಾಯಕ ಪ್ರತಿಮುಂಜಾನೆ ಮಂಟಪಕ್ಕೆ ಬಂದು ಮಗುವನ್ನು

ನೋಡಿಕೊಂಡು ನಂತರ ತನ್ನ ಕೆಲಸಕ್ಕೆ ಹೋಗುತ್ತಿದ್ದ. ಎರಡು

ಮೂರು ದಿನ ಕಳೆಯಿತು. ನಾಲ್ಕನೆಯ ಮುಂಜಾನೆ ಸಿಂಗಾನಾಯಕ

ಬಂದು ನೋಡುವಾಗ ನದಿಯ ಬಳಿಯ ಮಂಟಪ ಖಾಲಿ !

ಕಳವಳದಿಂದ ಸುತ್ತ ಮುತ್ತೆಲ್ಲಾ ಹುಡುಕಿದ. ತುಂಗೆಯೂ ಇಲ್ಲ,

ಮಗುವೂ ಇಲ್ಲ. ನಾಯಕನಿಗೆ ಜೀವವೇ ಹಾರಿಹೋದಂತಾಯಿತು.

ಮಗುವನ್ನೆತ್ತಿಕೊಂಡು ನಡೆದುಬಿಟ್ಟಳೇ ತುಂಗೆ ?  ಕೆಲವೇಕ್ಷಣಗಳಲ್ಲಿ 

ಊರಿನಜನವೆಲ್ಲ ಮಂಟಪದ ಬಳಿ ಜಮಾಯಿಸಿತು. ಹೌಹಾರಿದ

ಜನ ಏನಾಯಿತೆಂದು ತಿಳಿಯದೆ ಊಹಾಪೋಹಗಳ ಮಾತುಕತೆ

ನಡೆಸಿದ್ದಾಗ, ಪರವೂರಿನಿಂದ ವಾಪಸು ಬರುತ್ತಿದ್ದ ಶೀನ ಪರ್ಬು

ಬಂದು ಗುಂಪಿಗೆ ಸೇರಿದ. 


ವಿಷಯ ತಿಳಿದ ಶೀನಪ್ಪ, ತಾನು ಬರುತ್ತಿದ್ದಾಗ ಹಾದಿಯಲ್ಲಿ

ನಾಗಮಹಾಸತಿಯ ಕಟ್ಟೆಯ ಬಳಿ ಒಂದು ಮಗುವಿನ ಕೇಕೆ

ಕೇಳಿದಂತಾಯಿತೆಂದೂ ಆದರೆ ತಾನು ಸತಿಯ ಸ್ಥಳದಲ್ಲಿ ಆ

ಮಗುವಿನ ಕೇಕೆಯ ಶಬ್ದ ಕೇಳಿ ಹೆದರಿ ಅಕ್ಕ ಪಕ್ಕ ನೋಡದೆ

ದೌಡಾಯಿಸಿ ಬಂದೆನೆಂದೂ ತಿಳಿಸಿದ. ಜನರ ಗುಂಪು

ನಾಗಮಹಾಸತಿಯ ಕಟ್ಟೆಯಬಳಿಗೋಡಿತು. ನಾಗಮಹಾಸತಿಯ

ಕಟ್ಟೆಯಬಳಿ ಅವರು ಕಂಡ ದೃಶ್ಯ ಎಲ್ಲರನ್ನೂ  ದಿಗ್ಭ್ರಾಂತರನ್ನಾಗಿಸಿತು.  


ಕಟ್ಟೆಯ ಬದಿಯಲ್ಲಿ ತುಂಗೆಯ ಪೂರ್ಣಾಕಾರದ ಮಣ್ಣಿನ ಪ್ರತಿಕೃತಿ

ಮಲಗಿದೆ. ಮೇಲ್ಭಾಗ ನಗ್ನವಾಗಿದ ಮೂರ್ತಿಯ ಒಂದು ಸ್ತನ

ಮಣ್ಣಿನದಾದರೆ ಮತ್ತೊಂದು ನಿಜವಾದ ಮಾನವ ಸ್ತನವಿದೆ !! 

ಸ್ತನದಿಂದ ಒಸರುವ ಹಾಲುಕುಡಿಯುತ್ತ ಕೇಕೆಹಾಕುತ್ತಾ ಪಕ್ಕದಲ್ಲೇ

ಸಿಂಗಾನಾಯಕನ ಮಗು ಮಲಗಿದೆ ! 



ಒಂದು ವರುಷದಕಾಲವೂ ಮಗು ಬೆಳೆದು ತಾನಾಗಿ ಇತರ ಆಹಾರಕ್ಕೆ

ಒಗ್ಗಿಕೊಳ್ಳುವರೆಗೂ ಮಗುವಿಗೆ ಬೇಕಾದಾಗಲೆಲ್ಲಾ ಆ ಸ್ತನದಿಂದ

ಹಾಲು ಒಸರುತ್ತಲೇ ಇದ್ದಿತಂತೆ. ಮಗು ಅದನ್ನು ಕುಡಿದೇ ಬೆಳೆದು

ಬೇರೆ ಆಹಾರ ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಹಾಲು

ಒಸರುವುದು ತಾನೇ ತಾನಾಗಿ ನಿಂತು ಹೋಯಿತಂತೆ ! ಎಲ್ಲೆಲ್ಲಿ ಹುಡುಕಿ

ಏನೇನು ಪ್ರಯತ್ನ ಪಟ್ಟರೂ ತುಂಗಾತಾಯಿಯನ್ನು ಕಮ್ಮತಗೇರಿಯ

ಜನ ಮತ್ತೆ ಕಾಣಲೇ ಇಲ್ಲವಂತೆ. 


ಹಾಲು ಒಸರುವುದು ನಿಂತು, ಸ್ತನ ಒಣಗಿದನಂತರ ತುಂಗೆಯ

ಪ್ರತಿಕೃತಿಯನ್ನು ನಾಗ ಮಹಾಸತಿಯ ಕಟ್ಟೆಯ ಬದಿಯಲ್ಲೇ ನೆಲದಲ್ಲಿರಿಸಿ,

ಮಣ್ಣು ಮುಚ್ಚಿದ ಕಮ್ಮತಗೇರಿಯಜನ ಅಲ್ಲಿ ಏಕಸ್ತನಿ ದೇವಿಯ

ಪ್ರತಿಷ್ಠಾಪನೆ ಮಾಡಿ, ನೂರಾರು ವರುಷಗಳ ನಂತರವೂ 

ಪೂಜಿಸುತ್ತಿದ್ದಾರಂತೆ. 


(ತುಂಗೆಯ ಮೂರ್ತಿಯಿದ್ದ ಸ್ಥಳದಿಂದ ಅನತಿ ದೂರದಲ್ಲೇ ಒಂದು

ಪೊದೆಯ ಬಳಿ ತಾನು ರಕ್ತದ ಕಲೆಗಳನ್ನು ಕಂಡೆನೆಂದು

ನಂತರದಲ್ಲಿ ಬೊಮ್ಮಾಬೋವಿ ಯಾರಿಗೋ ಹೇಳಿದನಂತೆ.

ಆದರೆ ಕೇರಿಯ ಜನರು ಯಾರಿಗೂ ಸಿಂಗಾನಾಯಕನ ಮಗುವಿಗೆ

ಹಾಲೂಡಿಸಿದ ಸ್ತನದ ಬಗ್ಗೆ ಹೆಚ್ಚಿನ ಪುರಾವೆ ಬೇಕಿರಲಿಲ್ಲ) 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ